Wednesday, September 16, 2026

ಗಣೇಶ ಮತ್ತು ಉದುರಿದ ಎಲೆ – ಮಕ್ಕಳಿಗಾಗಿ ಒಂದು ಪುಟ್ಟ ಕಥೆ


ಪ್ರತಿದಿನ ಸಂಜೆ ಮಾಧವನು ಗಣೇಶನ ದೇವಸ್ಥಾನಕ್ಕೆ ಹೋಗುತ್ತಿದ್ದ. ದೇವಸ್ಥಾನದ ಪಕ್ಕದಲ್ಲಿ ಒಂದು ದೊಡ್ಡ ಬೇವಿನ ಮರವಿತ್ತು. ಮರದ ಕೆಳಗೆ ಕುಳಿತುಕೊಳ್ಳುವುದು ಮಾಧವನಿಗೆ ತುಂಬಾ ಇಷ್ಟ.

ಒಂದು ದಿನ ಫಟ್ ಎಂದು ಪುಟ್ಟ ಎಲೆ ಕೆಳಗೆ ಬಿತ್ತು. ಮಾಧವನು ಅದನ್ನು ಎತ್ತಿಕೊಂಡನು.

“ಅಯ್ಯೋ! ಎಲೆ ಬಿದ್ದಿದೆ!” ಅವನು ಮರದ ಕಡೆ ನೋಡಿ ಕೇಳಿದನು,

“ಗಣೇಶಾ, ಈ ಎಲೆ ಏಕೆ ಬಿತ್ತು? ಇದಕ್ಕೆ ಏನಾಯ್ತು?”

ಆಗ.....ಸರ... ಸರ... ಸರ...

ಮರದ ಎಲೆಗಳು ಗಾಳಿಯಲ್ಲಿ ಅಲುಗಾಡಿದವು.

ಮತ್ತೊಂದು ಎಲೆ ಬಿತ್ತು. ಪಟ್!

ಮತ್ತೊಂದು! ಪಟ್! ಪಟ್! ಮಾಧವನು ಮೇಲಕ್ಕೆ ನೋಡಿದನು.

“ಅಯ್ಯೋ! ಇಷ್ಟೊಂದು ಎಲೆಗಳು ಬೀಳುತ್ತಿವೆಯಲ್ಲ!”

ಆಗ ಅವನ ಕಣ್ಣಿಗೆ ಏನೋ ಹೊಸದೊಂದು ಕಾಣಿಸಿತು.

ಕೊಂಬೆಯ ಮೇಲೆ ಪುಟ್ಟ ಪುಟ್ಟ ಹಸಿರು ಎಲೆಗಳು!

“ಗಣೇಶಾ! ನೋಡು! ಹೊಸ ಎಲೆಗಳು!”

ಮಾಧವನ ಮನಸ್ಸಿನಲ್ಲಿ ಗಣೇಶನ ಮುದ್ದಾದ ಧ್ವನಿ ಕೇಳಿಸಿತು.

“ಹೌದು ಮಾಧವಾ! ಹಳೆಯ ಎಲೆಗಳು ಬಿದ್ದ ಜಾಗದಲ್ಲಿ ಹೊಸ ಎಲೆಗಳು ಬಂದಿವೆ.”

ಮಾಧವನು ಸ್ವಲ್ಪ ಹೊತ್ತು ಯೋಚಿಸಿದನು.

“ಅಂದರೆ, ಹಳೆಯ ಎಲೆಗಳು ಹೋಗಿವೆ... ಅವು ಮತ್ತೆ ಮರಕ್ಕೆ ಬರುವುದಿಲ್ಲ, ಅಲ್ವಾ ಗಣೇಶಾ?”

ಗಣೇಶನು ಮುದ್ದಾಗಿ ನಕ್ಕನು.

“ಹೌದು ಮಾಧವಾ! ಹೋದದ್ದು ಹೋಯಿತು. ಅದನ್ನು ಮತ್ತೆ ಮತ್ತೆ ಯೋಚಿಸಬೇಕಿಲ್ಲ.”

ಮಾಧವನು ಮತ್ತೆ ಕೇಳಿದನು,

“ಹಾಗಾದರೆ ನಾಳೆ ಏನಾಗುತ್ತದೆ ಎಂದು ಯೋಚಿಸಬೇಕಾ?”

“ಇಲ್ಲ ಮಾಧವಾ!”

ಗಣೇಶನು ನಗುತ್ತಾ ಹೇಳಿದನು,

“ನಿನ್ನೆ ಹೋಯಿತು. ನಾಳೆ ಇನ್ನೂ ಬಂದಿಲ್ಲ. ಇಂದು ಮಾತ್ರ ನಿನ್ನದು! ಆದ್ದರಿಂದ ಇಂದನ್ನು ಸಂತೋಷವಾಗಿ ಜೀವಿಸು.”

ಮಾಧವನ ಮುಖ ಅರಳಿತು.

“ಅಂದರೆ ಈಗ ನಾನು ಈ ಹೊಸ ಎಲೆಗಳನ್ನು ನೋಡಿ ಖುಷಿಪಡಬಹುದಾ?”

“ಖಂಡಿತ!”

ಸರ... ಸರ... ಸರ...

ಹೊಸ ಹಸಿರು ಎಲೆಗಳು ಗಾಳಿಯಲ್ಲಿ ಕುಣಿದವು.

ಮಾಧವನು ಚಪ್ಪಾಳೆ ತಟ್ಟಿದನು.

“ಹಲೋ ಹೊಸ ಎಲೆ! ಬಾ... ಬಾ... ನನ್ನ ಜೊತೆ ಕುಣಿ!”

ಅವನು ಗಣೇಶನ ಕಡೆ ನೋಡಿ ನಕ್ಕನು.

“ಗಣೇಶಾ, ನನಗೆ ಅರ್ಥವಾಯಿತು! ಹೋದದ್ದನ್ನು ಬಿಟ್ಟು, ಇಂದನ್ನು ಖುಷಿಯಾಗಿ ಬದುಕಬೇಕು!”

ಗಣೇಶನು ನಗುತ್ತಿರುವಂತೆ ಕಂಡನು. “ಅದೇ ನನ್ನ ಮುದ್ದು ಮಾಧವ!” ಮಾಧವನು ಕೈಮುಗಿದು ನಕ್ಕನು.

ಮಾಧವನ ಪುಟ್ಟ ಪ್ರಾರ್ಥನೆ 🙏
“ಗಣೇಶಾ, 
ಹೋದದ್ದನ್ನು ಬಿಡಲು ಕಲಿಸು.
ಇಂದನ್ನು ಖುಷಿಯಾಗಿ ಬದುಕಲು ಕಲಿಸು.
ನಾಳೆಯ ಬಗ್ಗೆ ಭಯಪಡದಂತೆ ಮಾಡು.
ನನ್ನ ಕೈ ಹಿಡಿದು ಯಾವಾಗಲೂ ನನ್ನ ಜೊತೆ ಇರು, ಬಪ್ಪಾ!”

“ಗಣಪತಿ ಬಪ್ಪಾ ಮೋರಯಾ!” 

ಕಥೆಯ ನೀತಿ

ನಿನ್ನೆ ಹೋಯಿತು, ನಾಳೆ ಇನ್ನೂ ಬಂದಿಲ್ಲ. ಇಂದು ನಮ್ಮ ಕೈಯಲ್ಲಿದೆ. ಹೋದದ್ದನ್ನು ಬಿಟ್ಟು, ಇಂದಿನ ಕ್ಷಣವನ್ನು ಸಂತೋಷದಿಂದ ಬದುಕೋಣ. 

ಇಂತಿ,

ಲೇಖಕಿ ಸಹನೆ.


 

No comments:

Post a Comment